ಟೈಗ್ರಿಡಿಯ  - 
 	ಇರಿಡೇಸಿ ಕುಟುಂಬಕ್ಕೆ ಸೇರಿದ ಒಂದು ಲಶುನ ಸಸ್ಯ. ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ ಬೆಳೆಸಲಾಗುತ್ತದೆ.  ಟೈಗ್ರಿಡಿಯ ಬಕ್ಸಿಫೆರ ಪ್ರಭೇದ ಇದರ ಹೂ ದಳಗಳ ಮೇಲೆ ಚಿತ್ರವಿಚಿತ್ರವಾದ ಗುರುತುಗಳಿದ್ದು ಹುಲಿಯ ಚರ್ಮದಂತೆ ಕಾಣುವುದರಿಂದ ಇದಕ್ಕೆ ಟೈಗರ್ ಹೂ ಎಂಬ ಹೆಸರೂ ಇದೆ ಪೆರು, ಚಿಲಿ ಮತ್ತು ಮಧ್ಯ ಅಮೆರಿಕ ಇದರ ಮೂಲ ನೆಲೆಗಳು. ಬೆಟ್ಟಸೀಮೆಗಳಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಇದರಲ್ಲಿ ಈರುಳ್ಳಿಯಲ್ಲಿರುವಂಥ ಗೆಡ್ಡೆಯುಂಟು. ಗೆಡ್ಡೆಯ ಮೇಲ್ಭಾಗದಿಂದ 30-75 ಛಿm. ಉದ್ದವಿರುವ ನೀಳಕಾಂಡ ಹೊರಡುತ್ತದೆ. ಇದರ ಬುಡದಲ್ಲಿ ಕಿರಿಯಗಲದ ಹಾಗೂ ಮಡಿಕೆಗೊಂಡಿರುವ ಕೆಲವು ಎಲೆಗಳಿವೆ. ಮೇಲ್ಭಾಗದಲ್ಲೂ 2-3 ಹೂಗಳು ಅರಳುತ್ತವೆ. ಪ್ರತಿಯೊಂದು ಹೂವಿನ ಬುಡದಲ್ಲೂ ಒಂದು ಉಪಪತ್ರ (ಸ್ಪೇದ್) ಇದೆ, ಹೂಗಳು ದೊಡ್ಡವು. ಹಳದಿ. ಕಿತ್ತಳೆ ಅಥವಾ ಉದಾಬಣ್ಣದಿಂದಲೂ ವಿಚಿತ್ರವಾದ ಚುಕ್ಕೆಗಳಿಂದಲೂ ಕೂಡಿದ್ದು ಬಲು ಆಕರ್ಷಕವಾಗಿ ಕಾಣುವುವು. ಹೂವಿನಲ್ಲಿ 6 ಪೆರಿಯಾಂತ್ ಹಾಲೆಗಳು, 3 ಕೇಸರುಗಳು, 3 ಕಾರ್ಪೆಲುಗಳಿಂದ ರಚಿತವಾದ ಅಂಡಾಶಯ ಇವೆ. ಕೇಸರಗಳ ಬುಡಗಳೆಲ್ಲ ಒಟ್ಟುಗೂಡಿ ಕೊಳವೆಯಂತಾಗಿವೆ. ಟೈಗ್ರಿಡಿಯವನ್ನು ಬೀಜಗಳಿಂದ ಮತ್ತು ಗೆಡ್ಡೆಯ ತುಂಡುಗಳಿಂದ ಬೆಳೆಸುವಂಥ ಸ್ಥಳ ಇದರ ಬೆಳೆವಣಿಗೆಗೆ ಅತ್ಯುತಮ. ಗೆಡ್ಡೆಗಳನ್ನು ಮಾರ್ಚ್-ಏಪ್ರಿಲ್ ವೇಳೆಗೆ ನೆಟ್ಟರೆ ಜುಲೈ-ಆಗಸ್ಟ್ ತಿಂಗಳಲ್ಲಿ ಹೂ ಅರಳುವುವು. ಪ್ಯಾವೋನಿಯ, ಬಕ್ಸಿಫೇರ, ಪ್ರಿಂಗ್‍ಲಿಯೈ ಮುಂತಾದವು ಟೈಗ್ರಿಡಿಯದ ಬಹು ಮುಖ್ಯ ಪ್ರಭೇದಗಳು.
(ಡಿ.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ